ಪತ್ರ – ೬

ಪತ್ರ – ೬

ಪ್ರೀತಿಯ ಗೆಳೆಯಾ,

ಈಗ ಈ ಹೊತ್ತು ಜಗತ್ತಿನ ಕಥೆಗಾರರೆಲ್ಲಾ ಕವಿಗಳೆಲ್ಲ ಏನು ಮಾಡುತ್ತಿರಬಹುದು, ಎಂಬ ಒಂದು ಆಲೋಚನೆ ತಲೆಯಲ್ಲಿ ಬಂತು. ಕೆಲವರು ಹೆಂಡತಿ ಮಕ್ಕಳನ್ನು ಕರೆದು ಮಾರ್ಕೆಟ್, ಗುಡಿ, ಶಾಪಿಂಗ್ ಹೋಟೆಲ್ ಅಂತ ಸುತ್ತುತ್ತಿರಬಹುದು. ಕೆಲವರು ಮನೆಯ ಮುಂದಿನ ಹೂಗಿಡಗಳಿಗೆ ನೀರು ಹಾಕುತ್ತ, ಹಾರುವ ಚಿಟ್ಟೆಯಿಂದ ಹೊರ ಹೊಮ್ಮುವ ಕವಿತೆಗಳ ಮನಸ್ಸಿನೊಳಗೆ ಇಳಿಸುತ್ತಿರಬಹುದು, ಇನ್ನೂ ಕೆಲವರು ವಾರದ ದಣಿವನ್ನು ಟಿ.ವಿ. ಮುಂದೆ ಮೇಲೆ ಕುಳಿತು ಎನ್ಜಾಯ್ ಮಾಡುತ್ತಿರಬಹುದು, ಮತ್ತೆ ಕೆಲವರು ಕಂತುವ ಸೂರ್ಯನೊಂದಿಗೆ ತಾವು ಭರಿಸಲಾಗದ ದುಃಖವನ್ನು ಕಂತಿಸಿ ಬಿಡುವ ಯತ್ನದಲ್ಲಿ ಇರಬಹುದು. ನಿನಂತೂ ಕಂಪ್ಯೂಟರಿನ ಬಟನ್ ಒತ್ತುತ್ತಿರಬಹುದು. ಗೆಳೆಯಾ, ನಾನೀ ಪತ್ರವನ್ನು ನಾನು ಬಾಲ್ಯದಿಂದ ಪುಟ್ಟ ಪಾದಗಳನ್ನು ಇರಿಸಿ ತೇಲಿದ ರೇಲ್ವೆ ಪಟ್ಟಿಗಳ ಮೇಲೆ ಬಿದ್ದ ಸೂರ್ಯನ ಕಿರಣಗಳನ್ನು ನೋಡುತ್ತ ಯಾವುದೋ ಹಳವಂಡದ ಕ್ಷಣಗಳನ್ನು ನಿನಗೆ ದಾಖಲಿಸುತ್ತಿದ್ದೇನೆ.

ಈ ರೇಲ್ವೆ ಹಳಿಗಳು ನನ್ನ ಬದುಕಿಗೆ ಕೆಲವು ಅಕಾಲಿಕ ನೆರಳನ್ನು ದಾಟಿಸಿದೆ ಆಗಿನ್ನೂ ಹದಿಮೂರು, ಕಣ್ಣ ತುಂಬ ಕನಸು. ದೇಶಸುತ್ತಲು ಹೋಗಿದ್ದ ಜೋಗಿ ಅಪ್ಪ ಮಕ್ಕಳು ಅವರಿವರ ಮನೆಯಲ್ಲಿ. ಹಸಿದ ಹೊಟ್ಟೆಗೆ ಏನಾದರೂ ಕೇಳಲು ಸಂಕೋಚ, ಹಸಿದ ಹೊಟ್ಟೆಯನ್ನು ಬದಿಗಿರಿಸಿ, ಅಕ್ಕ ನಾನು ಸೂರ್ಯಕಂತುವ ಹೊತ್ತು ಶಾಲೆಯಿಂದ ಮರಳಿಬರುವಾಗ, ಈ ರೇಲ್ವೆ ಪಟ್ಟಿಗಳ ಪ್ರತಿಫಲಿಸುವ ಬಂಗಾರದ ಬಣ್ಣದ ಓಕಳಿಯಲ್ಲಿ ನಮ್ಮಿಬ್ಬರ ಪುಟ್ಟ ಪಾದಗಳನ್ನು ಅದ್ದುತ್ತಿದ್ದೆವು. ಹಸಿವು ಎಲ್ಲೋ ಮಾಯವಾಗುತ್ತಿತ್ತು. ಅಕ್ಕ ನನ್ನ ಕೈಗಳು ಒಂದನ್ನೊಂದು ಬಿಗಿದುಕೊಂಡು ಬದುಕಿನ ಸರ್ಕಸ್ಸ್‍ನ್ನು ಜೀಕಿದಾಟುವಂತೆ, ಒಂದು ಹುರುಪನ್ನು ಆ ಸಂಜೆಯಲ್ಲಿ ಎದೆಯ ಗೂಡಿನಲ್ಲಿ ಬಚ್ಚಿಡುತ್ತಿದ್ದೆವು. ಹೀಗೆ ಸಾಗುತ್ತಿದ್ದಾಗ ಒಮ್ಮೆ ಅಕ್ಕನ ಲಂಗದಲ್ಲಿ ನನ್ನ ಲಂಗದಲ್ಲಿ ಉರಿಯುತ್ತಿದ್ದ ಕೆಂಪು ಸೂರ್ಯ ಮೂಡಿಬಿಟ್ಟ. ಎಷ್ಟೊಂದು ಹಿಂಡಿ ಹಿಪ್ಪಿಯಾಗಿದ್ದೆವು. ಅವರಿವರು ನೀರು ಹಾಕುತ್ತಿರಲಿಲ್ಲ. ಆಗ ಈ ರೇಲ್ವೆ ಸ್ಟೇಶನ್ (ಆಗ ಪ್ರವಾಸಿಗರು ಅಷ್ಟೊಂದು ಇರುತ್ತಿರಿಲ್ಲ) ವೇಟಿಂಗ್ ರೂಮು, ಅಮ್ಮ ಸತ್ತ ಮಕ್ಕಳಿಗೆ ಅದ್ಭುತ ರಕ್ಷಣೆಯ ತಾಣವಾಯ್ತು. ನಮ್ಮ ಕೆರೆಕೆರೆಯ ದಿನಗಳಿಗೆ ಅದು ಆ ವೇಟಿಂಗ್ ರೂಮು, ನಮ್ಮ ಅನುಕೂಲಕ್ಕೆ ಸಂಗಾತಿ ಆಯ್ತು. ಉದ್ದ ಕೈಯಾ ಖುರ್ಚಿಗಳು, ದುಂಡನೆಯ ಮೇಜು, ಉದ್ದ ಕನ್ನಡಿ, ಆ ಕನ್ನಡಿಯಲ್ಲಿ ನೋಡಿಕೊಂಡು ಹೋದ ಎಷ್ಟೊಂದು ಮುಖಗಳು. ಆಗ ನಮ್ಮ ಮುಖಗಳು ರಾಜಕುಮಾರಿಯರದ್ದಾಗಿತ್ತು. ನಾನು ಆಗಾಗ ಈ ರೇಲ್ವೆಸ್ಟೇಶನ್ಗೆ ಬಂದು ಕೂಡುತ್ತೇನೆ. ಅವರಿವರ ಮನೆ ಇಲ್ಲೇ ಇದೆ. ಆದರೆ ಈಚೆ ಹಾಗೂ ಬಂದು ದಾಟಿ ಹೋಗುವ ರೇಲ್ವೆ ಡಬ್ಬಿಗಳಲ್ಲಿ ಕಂಡ ಮುಖ, ಕಣ್ಣೋಟಗಳ ನನ್ನ ಸ್ನೇಹಿತರದೋ ಬಂಧುಗಳದ್ದೋ ಅನಿಸಿಬಿಡುತ್ತದೆ. ನನ್ನ ಬಳಗ ಬಹಳ ದೊಡ್ಡದಿದೆ. ಈ ಸಂಜೆ ನಾನು ಒಬ್ಬಂಟಿ ಅಲ್ಲ ಅನಿಸುತ್ತದೆ. ಒಮ್ಮೊಮ್ಮೆ ದಿಗಿಲಾಗುತ್ತದೆ. ಈ ರೇಲ್ವೆಯಲ್ಲಿ ಬಾಂಬು ಹಿಡಿದು ಕೊಂಡು ಆಲಮಟ್ಟಿ ಜಲಾಶಯಕ್ಕೆ ಹೋಗುವರು ಹತ್ತಿದ್ದಾರೋ ಎಂದು.

ಬಾಲ್ಯದಲ್ಲಿ ನಮ್ಮ ಮನಸ್ಸಿನ ಬಿಂಬದಲ್ಲಿ ಎಷ್ಟೊಂದು ಫಲಕುಗಳು ಭಿತ್ತಿ ಮೂಡಿಸುತ್ತವೆ. ನಮ್ಮ ಮನಸ್ಸಿಗೆ ಹಿತಮುದ ನೀಡಿದ ವಸ್ತುಗಳ, ಸ್ಥಳಗಳ, ವ್ಯಕ್ತಿಗಳ ಅರಸುತ್ತ, ಒಮ್ಮೊಮ್ಮೆ ನಾವು ಅಲೆದಾಡುತ್ತೇವೆ. ಅದು ಕಾಡಾಗಿರಬಹುದು, ನಾಡಾಗಿರಬಹುದು. ಇಂತಹ ಮನಸ್ಸಿನ ಸ್ಥಿತಿಗೆ ಏನನ್ನಬೇಕೋ, ನನಗೆ ರೇಲ್ವೆಸ್ಟೇಶನ್, ಅಲ್ಲಿನ ಚಹಾದಂಗಡಿಗಳು, ಪೋರ್ಟರರ ಪುಟ್ಟ ಪುಟ್ಟ ಮನೆ, ವೇಟಿಂಗರೂಮ್, ಗಾಡಿ ಬಂದಾಗ ಸಾಮಾನುಗಳೊಂದಿಗೆ ಪುಟ್ಟ ಮಕ್ಕಳ ಕೈ ಹಿಡಿದು ಹೊರಟ ತಾಯಂದಿರು, ಊರು ಮುಟ್ಟಬೇಕೆಂಬ ತವಕದೊಂದಿಗೆ ರೇಲ್ವೆ ಡಬ್ಬಿಗಳ ತಡಕಾಡುವ ಪ್ರಯಾಣಿಕರು, ಮುಟ್ಟಿ ಬಿಟ್ಟೆವಲ್ಲ ಎಂಬ ನಿರಾಳ ಭಾವದಿಂದ ಇಳಿಯುವರು, ಗಾಡಿ ಬಂದು ನಿಂತಾಗ ಇಡೀ ಪ್ಲಾಟ್ ಫಾರಂ ತುಂಬುವ ಕೌನೆರಳು, ಅದರಡಿಯಲ್ಲಿ ನಡೆಯುವ ಬಹಿರಂಗ ಚಟುವಟಿಕೆ, ಯಾರದೋ ಕಣ್ಣುಗಳು, ನೋಟಗಳು, ಗ್ಲಾಸಿನಲ್ಲಿದ್ದ ಬಿಸಿ ಚಹಾವನ್ನು ಸುಡುತ್ತಲೇ ಗಂಟಿಲೊಳಗೆ ಇಳಿಸುವ ಯಾತ್ರಿಕ, ನೀಲಿವಸ್ತ್ರದ ಕೂಲಿಗಳು, ಕೆಂಪು ಹಸಿರು ಬಾವುಟದ ಟಿ.ಸಿ. ಅವನ ಕೈಯಲ್ಲಿರುವ ಕಂದೀಲು, ಟಿಕೇಟು ತೆಗೆದು ಕೊಂಡು ಹೊರಗೆ ಬಿಡುವ ಸ್ಟೇಶನ್ ಮಾಸ್ತರು, ಎಲ್ಲವೂ ಅದ್ಭುತ ಗೆಳೆಯಾ. ಈ ಸಂಜೆ ನಾನು ಮುದ್ದಾಂ ಫ್ರೆಡ್ನ ಎನಲಿಸಿಸ್ ಆಫ್ ಡ್ರೀಮ್ ಪುಸ್ತಕ ಹಿಡಿದು ಬಂದು ಕುಳಿತಿದ್ದೇನೆ. ನಲವತ್ತು ವರ್ಷದ ಕೆಳಗೆ ನಾನು ಹತ್ತು ವರ್ಷದವಳಿದ್ದಾಗ ಹೇಗೆ ಒಂದು ಗಡಿ ದಾಟಿ ಹೋದಾಗ ಮನಸ್ಸಿನಲ್ಲಿ ಭಾವನೆಗಳು ಮೂಡಿದ್ದವೋ, ಇವತ್ತಿಗೂ ಅದೇ ಭಾವ ಅದೇ ಆಲೋಚನೆಗಳು ಮೂಡಿದವು ಮನಸ್ಸಿನಲ್ಲಿ, ಈ ಖಾಸಗೀತನದ ಏಕಾಂತದಲ್ಲಿ ಜೀವನವನ್ನು ಪೋಷಿಸುವ ಕಾಣ್ಕೆಗಳು ಮೊಗ್ಗೂಡೆದವು. ಇದು ಸಪ್ನವೂ ಹೌದು. ವಾಸ್ತವವೂ ಹೌದು. ಈ ರೇಲ್ವೆ ಸ್ಟೇಶನ್ನಿನಲ್ಲಿ ಅರಳಿದ ಈ ಸಂಜೆ, ಈ ಜಗದ ಪಾಡು, ಜೀವದ ಹಾಡಾಗುತ್ತದೆ. ನನ್ನ ಎದೆಯಲ್ಲಿ ಸಿಗ್ನಲ್ ಲೈಟುಗಳು ಮಿನಗುತ್ತಲಿವೆ.

ಎಲ್ಲ ಎಚ್ಚರ ಸ್ವಚ್ಛ ಸರಳ ಭಾವಗಳನ್ನು ಸುಮ್ಮನೆ ಖಾಲಿ ಪುಟಗಳಲ್ಲಿ ಬರೆಯಬೇಕು. ನೋಡ ಬಯಸಿದ್ದನ್ನೆಲ್ಲಾ ನಾವು ನೋಡುತ್ತಲೇ, ನಾವು ಪ್ರತಿ ದಿನ, ಹೊಸದಿನವನ್ನಾಗಿರಿಸಬೇಕು ಏನಂತಿ ನೀನು?

ಬ್ರಿಟಿಷರು ಹರವಿದ ಈ ಸಾಮ್ರಾಜ್ಯದ ಎಲ್ಲಾ ದಿಕ್ಕುಗಳಲ್ಲಿ ಅಂದಿನ ಭಾರತದ ಮನಸ್ಸುಗಳು ಓಡಿದಂತೆ ಇಂದೂ ಆಧುನಿಕ ಜಗತ್ತಿನ ಓಟದಲ್ಲಿ ರೇಲ್ವೆಹಳಿಗಳ ಗುಂಟ ಓಡಿದ ನಂಟುಗಳು, ಒಮ್ಮೊಮ್ಮೆ ಸಾವಿನ ಮನೆಯ ಬಾಗಿಲಿಗೆ ತಂದು ನಿಲ್ಲುಸುತ್ತದೆಯಲ್ಲಾ, ಅವಾಗ ಈ ನಾಗರೀಕತೆಯೇ ಬೇಡ ಅನಿಸುತ್ತದೆ. ರೇಲ್ವೆ ಬೋಗಿಯಲ್ಲಿ ಕುಳಿತು ಓಡುವ ಚಂದಿರ, ಮೋಡಗಳ ಸಾಲುಗಳು, ಮರಗಳು, ಕುರಿಗಾರರು, ಪುಟ್ಟ ಪುಟ್ಟ ಹಳ್ಳಿಗಳು, ಬೇಲಿಯ ಮೇಲಿನ ಹೂಗಳು, ಎಲ್ಲೋ ಬಿಚ್ಚುವ ಬುತ್ತಿ ಚೀಲ, ಒಮ್ಮೊಮ್ಮೆ ಬೋಗಿಯ ಬಾಗಿಲಿಗೆ ನಿಂತು ರೋಯ್ ಎನ್ನುವ ಗಾಳಿಗೆ ಒಡ್ಡಿದ ಮುಖ, ತಿರುಗಣಿ ಚೆಂಬು (ಈಗ ಪ್ಲಾಸ್ಕ್) ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ವಿಶಿಷ್ಟ ಪರಿಮಳ ಮತ್ತು ಕಂಪನ ಹುಟ್ಟಿಸಿದ ಪಲುಕುಗಳೇ. ಎಲ್. ಕೆ. ಜಿ. ಮಗುವನ್ನು ಕೇಳಿದರೂ ಅದು ಚುಕುಬುಕು ಚುಕುಬುಕು ಕೂ…. ಅಂತ ಹೇಳುತ್ತದೆ. ಅಷ್ಟೊಂದು ಆತ್ಮೀಯ ಸಂಬಂಧಗಳು ಈ ಚಲಿಸುವ ಡಬ್ಬಿಯಲ್ಲಿ ತುಂಬಿವೆ. ನೀನು ಇಂಗ್ಲೆಂಡಿನಲ್ಲಿ ಇದ್ದಾಗ ಒಮ್ಮೆ ಯಾದರೂ ರೇಲ್ವೇ ಹತ್ತಿ ಲಂಡನ್ ಬ್ರಿಜ್ ದಾಟಿದೆಯೋ ಹೇಗೆ? ಇಂಗ್ಲೆಂಡಿನಲ್ಲಿ ರೇಲ್ವೆಯಲ್ಲಿ ಸಂಚರಿಸುವದೆಂದರೆ ಬಹಳ ಅನೂನ್ಯ ಅನುಭವ ಅಂತ ಅಲ್ಲಿಗೆ ಹೋಗಿ ಬಂದವರೆಲ್ಲಾ ಬರೆದಿರುತ್ತಾರೆ. ಅಲ್ಲಿನ ಕಂಟ್ರಿಸೈಡನ್ನು ಚಲಿಸುವ ರೇಲ್ವೆಯ ಮುಖಾಂತರವೇ ನೋಡಬೇಕು ಅಂತ ಇಂಗ್ಲೀಷ್ ಕವಿಗಳು ತಮ್ಮ ಕವನದಲ್ಲಿ ಬಿಂಬಿಸಿರುತ್ತಾರೆ.

ನನಗೆ ಈ ಸಂಜೆ ಫ್ರಾಯ್ಡನ ಕನಸುಗಳು ವಿಶ್ಲೇಷಣೆಯ ಪುಟಗಳು ಮಹತ್ವದವು ಅನಿಸಲಿಲ್ಲ. ಈ ನಿರಂತರ ಖುಷಿ, ದುಃಖ ಅವರು ಇವರು ಅಚೊತ್ತಿಕೊಂಡ ಆಳವಾದ ಭಾವಗಳು ಎಂದೂನಮ್ಮ ಬೆನ್ನು ಬಿಡುವದಿಲ್ಲ. ಮನಸ್ಸಿನ ತರಂಗಗಳು ಕಥೆಯಲ್ಲದ ಕತೆಗಳನ್ನು ಹುಟ್ಟಿಸುತ್ತವೆ. ನಾವು ಕಠಿಣವಾದದ್ದು, ರಾಜಿಯಾದದ್ದು, ಹಾಕಿಕೊಂಡ ನೀತಿ ನಿಯಮಗಳು, ಗರಿಕೆದರಿಸಿಕೊಂಡು ಪ್ರೀತಿ, ನಮ ಚರ್ಚೆ ವಾದ ಜಗಳ, ರಂಜನೆ, ಹರಟೆ, ಎಲ್ಲರೊಂದಿಗೆ ಬೆರೆಯುವುದು, ಎಲ್ಲರಿಂದ ದೂರವಾಗ ಬಯಸುವುದು, ಎಲ್ಲವೂ ನಮ್ಮೊಳಗೆ ಹುಟ್ಟಿನಮ್ಮ ಮೇಲೆ ಪ್ರಾಧನ್ಯತೆ ಹೇರಿಬಿಡುತ್ತದೆ. ರಫಿ ಹಾಡುತ್ತಿದ್ದಾನೆ. ಲಿಖೆಗೆ ಖತ್ ತುಜೆ, ಓ ತೇರಿ ಯಾದಮೇ ಹಜಾರೊರಂಗಸೇ, ಸವೇರಾ ಜಬ್ ಹವಾ ತೋ ಪೂಲ್ ಬನ್ಗಯೇ, ತೋ ರಾತ್ ಆಯೆ ಓ ಸಿತಾರೆ ಬಸ್ ಗಯ… ಅದು ರೇಡಿಯೋ ಧ್ವನಿ. ಈ ರೇಲ್ವೆ ಸ್ಟೇಶನ್ನಿನ ಪೋರ್ಟರ ಹೊಸಕಾಲ ದಯಪಾಲಿಸಿದ ಎಲ್ಲಾ ಸೌಲಭ್ಯಗಳೂ, ಎಲ್ಲಾ ದೊರಕುವಿಕೆಗಳ ನಡುವೆ ಭೂತಕಾಲದ ಖಾಸಗೀ ಪ್ರವರಗಳು, ಗ್ರಹಿಕೆಗಳು, ಮತ್ತೆ ಮತ್ತೆ ಮನಸ್ಸಿನಲ್ಲಿ ಮೊಳಕೆ ಒಡೆಯುತ್ತದೆಯಲ್ಲಾ? ನೋವಿಗೆ, ಖುಷಿಗೆ ಚಿನುಗುವ ಈ ಕ್ಷಣಗಳಿಗೆ ನೀನು ಏನು ಹೇಳುತ್ತಿ? ನನಗಂತೂ ಭೂತದ ಮನಸ್ಸುಗಳ ಅರಳಿದ ಮುಂಜಾನೆ, ಅವಸರದಲ್ಲಿ ಓಡಿ ಸರಿದ ರೇಲ್ವೆ ಡಬ್ಬಿಗಳು, ಮೂಡಿಯೂ ಮಾಯವಾದ ಮುಖಗಳು, ಇನ್ನೂ ಒಂದು ಹೊಸ ನೋಟ ಎಂಬಂತೆ ಜಾರುವ ಕಣೋಟಗಳು, ತಲ್ಲಣಿಸುವ ಕ್ಷಣಗಳು, ಅಪೂರ್ವ ಎನಿಸುತ್ತದೆ. ಎಲ್ಲೋ ಜಾರಿದ ಕ್ಷಣಗಳು ಇಬ್ಬನಿಯಾಗಿ ಬಯಲ ಹಸಿರಲ್ಲಿ ಮಿನುಗುತ್ತದೆ. ಆ ಮನಸೆಂಬ ಮಹಾಸಾಗರದ ಅಲೆಗಳು ಬದುಕಿನ ಬಗೆಯನ್ನು ತೋರಿಯಾವು, ಏಕಾಂತದಲ್ಲಿ ಖಾಲಿಯಾದಾಗ ಮತ್ತೆ ಭಾವ ಆವರಿಸಿಕೊಳ್ಳುತ್ತದೆ. ಎಲ್ಲಾ ಕಂದಕಗಳು ಅಂತರಗಳು ಎಲ್ಲವನ್ನು ಮೀರಿ ನಮ್ಮೊಳಗೆ ಇಳಿದಾಗ, ನಾವು ಬೇರುಗಳೊಡನೆ ಇಳಿದ ಸ್ನೇಹಿತರೊಡನೆ ಮಾತನಾಡಿಕೊಳ್ಳುತ್ತೇವೆ. ಸಂಜೆಯ ಮೌನ ದಾಹತಲ್ಲಣಗಳು ಗೆಳೆಯರೊಂದಿಗೆ ಹಂಚಿಕೊಂಡಾಗಲೇ ಹಗುರವಾಗುತ್ತದೆ. ನಿನ್ನ ಸ್ನೇಹದ ಪ್ರಭಾವ ನನ್ನ ಮೇಲೆ ಇಲ್ಲದಿದ್ದರೆ ಖಂಡಿತ ನಾನು ಈ ಕ್ಷಣಗಳನ್ನು ನಿನ್ನ ಪತ್ರದಲ್ಲಿ ದಾಖಲಿಸುತ್ತಿರಲಿಲ್ಲ. ನೀನು ನಿಧಾನವಾಗಿ ನನ್ನದೆಯೊಳಗೆ ಇಳಿದ ಗೆಳೆಯ. ಯಾಕೋ ಈಜಿ ದಡಸೇರುವ ತವಕ ಇರುವ ನನಗೆ ಪ್ರಾಣ ವಾಯುವಿನಂತೆ ನಿನ್ನ ಸ್ನೇಹಸಿಕ್ಕಿದೆ. ಮನ ಒಪ್ಪಿ ಅಪರೂಪದ ಪಟ್ಟಿಯಲ್ಲಿ ಕಾಣುವ ಹೆಸರು ನಿನ್ನದು. ನನ್ನದು ಹೊಸದಿಕ್ಕಿನ ವಿಚಾರ. ನಾನು ಮನದಲ್ಲಿ ಮನಸ್ಸಿನ ವಾಚಾಳಿತನವನ್ನು ಗಮನಿಸಿದಳು. ಇದು ಅಹಂಕಾರವಲ್ಲ ಗೆಳೆಯಾ ಪ್ರೀತಿ.

ಮನಸ್ಸಿನಲ್ಲಿ ಹುಟ್ಟಿದ ಎಷ್ಟೊಂದು ವಿಚಾರಗಳನ್ನು ಸೂಕ್ಷ್ಮತೆಗಳನ್ನು ಭರವಸೆಗಳನ್ನು ಈ ರೇಲ್ವೇ ಸ್ಟೇಶನ್ನಿನ ಪ್ಲಾಟ್ಫಾರಂ ಮೇಲೆ ನಾನು ಬಿಕರಿಗೆ ಇಟ್ಟಿದ್ದೇನೆ. ಇದು ನನಗೆ ಬದುಕುವ ಕಳಕಳಿಯ ಕ್ಷಣಗಳನ್ನು ಕಲಿಸಿದ ತಾಣ. ಇಲ್ಲಿ ನನ್ನ ದಾರಿ ನನಗೆ ರೇಲ್ವೆ ಹಳಿಗಳ ಮೇಲೆ ನಿಶ್ಚಿತವಾಗಿ ಕಂಡಿವೆ. ಜೀವನದ ನಡಾವಳಿ ತಲುಪುವ ಗಮ್ಯ, ಅಪಾಯ, ಖುಷಿ ಬಧ್ರತೆ ಎಲ್ಲವೂ ಈ ರೇಲ್ವೆ ಸ್ಟೇಷನ್ ನನಗೆ ತೆರೆದು ತೋರಿಸಿದೆ. ಸಂಜೆ ಏಳುವರೆಗೆ ಒಂದು ರೇಲ್ವೆ ಈ ಪಟ್ಟಿಗಳ ಮೇಲೆ ಹಾದು ಹೋಗುತ್ತದೆ. ಅಲ್ಲಿಯ ವರೆಗೆ ನಾನು ಮನಸ್ಸಿನೊಂದಿಗೆ ಮುಕ್ತ ಸಂಭಾಷಣೆ ನಡೆಸುತ್ತೇನೆ. ಅಕಸ್ಮಾತ್ ಒಂದು ವೇಳೆ ನೀನು ಆ ಚಲಿಸುವ ರೇಲ್ವೆ ಡಬ್ಬಿಯಿಂದ ಇಳಿದು ಬಂದರೆ ಕಂಡಿತ ಪ್ರೀತಿಯಿಂದ ಕೈ ಹಿಡಿದು ನಿನ್ನನ್ನು ಬರಮಾಡಿಕೊಳ್ಳುವೆ.

ನಿನ್ನ,
ಕಸ್ತೂರಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಷ್ಟು ಕಾಲ?
Next post ವಿವಿಯನ್

ಸಣ್ಣ ಕತೆ

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

cheap jordans|wholesale air max|wholesale jordans|wholesale jewelry|wholesale jerseys